ಜಾತ್ರೆಗಳು -
ಜಾತ್ರೆ ಎನ್ನುವುದು ಯಾತ್ರಾ ಎಂಬ ಸಂಸ್ಕøತ ಪದದಿಂದ ಬಂದದ್ದು. ಪ್ರಸಿದ್ಧ ಕ್ಷೇತ್ರದರ್ಶನ ಮಾಡಲು ಜನ ಯಾತ್ರೆ ಹೋಗುತ್ತಾರೆ. ವರ್ಷಕ್ಕೊಮ್ಮೆ ಅಂಥ ಸ್ಥಳಗಳಲ್ಲಿ ಜನರ ಜಾತ್ರೆ ಸೇರುತ್ತದೆ. ಪ್ರಸಿದ್ಧ ದೇವರಿಗೆ ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವ ಕಾಲ ಜಾತ್ರೆಗೆ ಪ್ರಶಸ್ತ ಕಾಲ.

	ಜಾತ್ರೆ ಸಾಮಾನ್ಯವಾಗಿ ಒಂದು ದಿನದಿಂದ ಹತ್ತು_ಹದಿನೈದು ದಿನಗಳವರೆಗೂ ನಡೆಯುತ್ತದೆ. ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಕೆಲವು ಇವು : ತಿರುಪತಿಯ ಬ್ರಹ್ಮೋತ್ಸವ, ಪಂಡರಾಪುರದ ಆಷಾಢಶುದ್ಧ ಏಕಾದಶೀ ಜಾತ್ರೆ, ಉಡುಪಿಯ ಪರ್ಯಾಯೋತ್ಸವ, ಮೇಲುಕೋಟೆಯ ವೈರಮುಡಿ, ಬೆಂಗಳೂರು ಕರಗ, ತಲಕಾಡಿನ ಪಂಚಲಿಂಗ ದರ್ಶನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಪ್ರಯಾಗದ ಕುಂಭಮೇಳ, ಕಲ್ಕತ್ತದ ನವರಾತ್ರಿಕಾಲದ ಕಾಳಿದೇವಿ ಉತ್ಸವಗಳು, ಶ್ರೀಶೈಲದ ಜಾತ್ರೆ, ಸವದತ್ತಿಯ ಎಲ್ಲಮ್ಮನ ಜಾತ್ರೆ, ಮಹದೇಶ್ವರನ ಬೆಟ್ಟದ ಜಾತ್ರೆ, ಮುಡುಕುತೊರೆ ಚುಂಚನಕಟ್ಟೆ, ನಂಜನಗೂಡು, ಶ್ರೀರಂಗಪಟ್ಟಣ ಮತ್ತು ಮೈಸೂರಿನ ಚಾಮುಂಡೇಶ್ವರಿ ರಥೋತ್ಸವಗಳು. ಇವು ವರ್ಷದ ಆಯಾ ನಿರ್ದಿಷ್ಟ ಕಾಲಗಳಲ್ಲಿ ನಿರ್ದಿಷ್ಟವಾದ ಅವಧಿಯಲ್ಲಿ ವಿಜೃಂಭಣೆಯಿಂದ ಜರುಗುವ ಉತ್ಸವಗಳು.

	ಜಾತ್ರೆಗಳನ್ನು ಅವು ನಡೆಯುವ ಊರು ಮತ್ತು ಉತ್ಸವ ನಡೆಯುವ ದೇವರ ಹೆಸರುಗಳಿಂದ ಕರೆಯುತ್ತಾರೆ. ಇದರಂತೆಯೇ ಕೆಲವು ಸಂದರ್ಭಗಳಲ್ಲಿ ಗ್ರಹಯೋಗ ವಿಶೇಷದಿಂದ ಪುಣ್ಯನದಿಗಳ ಸ್ನಾನಕ್ಕಾಗಿ ಜನ ಒಂದೇ ನಿರ್ದಿಷ್ಟ ಕಾಲದಲ್ಲಿ ಒಂದೆಡೆಯಲ್ಲಿಯೇ ಸ್ನಾನದಾನ ಮೊದಲಾದುವನ್ನು ಮಾಡುವುದಕ್ಕಾಗಿ ಸೇರುತ್ತಾರೆ. ಇವೂ ಜಾತ್ರೆಗಳೇ. ಇವನ್ನು ಮೇಳ ಎಂದೂ ಕರೆಯುತ್ತಾರೆ.

	ಈ ಜಾತ್ರೆಗಳು ಮತದ ದೃಷ್ಟಿಯಿಂದಲ್ಲದೇ ಸಮಾಜದ ದೃಷ್ಟಿಯಿಂದಲೂ ಮುಖ್ಯವಾಗಿವೆ.		    (ಎಸ್.ಎನ್.ಕೆ.)

	ಜನ ಪರಸ್ಪರ ಕಲೆತು ಅವರ ನಡುವಣ ಸಂಪರ್ಕ ಹೆಚ್ಚಲು ಜಾತ್ರೆಗಳು ಸಹಾಯವಾಗುತ್ತವೆ. ಜಾತ್ರೆಗಳಲ್ಲಿ ಜನರ ಗುಂಪು ಅಧಿಕವಾಗಿರುವುದರಿಂದ ವ್ಯಾಪಾರಿಗಳಿಗೆ ಅದೊಂದು ಒಳ್ಳೆಯ ಕಾಲ. ದನಗಳ ಪ್ರದರ್ಶನ, ಕ್ರ್ರಯವಿಕ್ರಯಗಳು ಇಲ್ಲಿ ನಡೆಯುತ್ತವೆ. ಧಾರ್ಮಿಕ, ಸಾಂಸ್ಕøತಿಕ, ಆರ್ಥಿಕ, ವ್ಯಾವಹಾರಿಕ ಪ್ರಾಮುಖ್ಯ ಉಳ್ಳವಾಗಿ ಆಯಾ ಸ್ಥಳದ ವಿಶಿಷ್ಟ ಪದಾರ್ಥಗಳು ವಿಲೇವಾರಿಯಾಗಲು ಜಾತ್ರೆಗಳು ಸಹಾಯಕವಾಗಿವೆ. ಹಲವು ಮುಖ್ಯ ಜಾತ್ರೆಗಳು ಒಳ್ಳೆಯ ವ್ಯಾಪಾರ ಕೇಂದ್ರಗಳೆನಿಸಿವೆ. ಹೂವು, ಹಣ್ಣು, ಕಾಯಿ, ಸಕ್ಕರೆ ಕರ್ಪೂರಚಿತ್ರಗಳು ಸ್ಥಳಮಹಿಮೆ ಪುಸ್ತಕಗಳು ಇತ್ಯಾದಿಗಳ ವ್ಯಾಪಾರವೇ ಹೆಚ್ಚು. ಇವುಗಳಿಂದ ಸರ್ಕಾರಕ್ಕೆ ಪರೋಕ್ಷ, ಪ್ರತ್ಯಕ್ಷ ತೆರಿಗೆಗಳ ಮೂಲಕ ಅಪಾರ ಆದಾಯ ಉಂಟು.

	ಇಂಥ ಜಾತ್ರೆಗಳು ಭಾರತದೇಶಕ್ಕೆ ಮಾತ್ರ ಸೀಮಿತವೇನೂ ಅಲ್ಲ. ಪ್ರಪಂಚದ ನಾನಾ ದೇಶಗಳಲ್ಲೂ ಈ ತೆರನಾದ ಉತ್ಸವಗಳು ಉಂಟು. ಸಿರಿಯ, ಪ್ಯಾಲಸ್ಟೈನ್, ಮೆಸಪೊಟೆಮಿಯ ಕಣಿವೆ, ಈಜಿಪ್ಟ್, ಅರೇಬಿಯಗಳಿಗೆ ಭೇಟಿಕೊಟ್ಟ ವ್ಯಾಪಾರಿಗಳು ಈ ಬಗೆಯ ಜಾತ್ರೆಗಳನ್ನು ಕುರಿತು ಹೇಳಿದ್ದಾರೆ. ಗ್ರೀಸಿನ ಡಿಮಾಸ್ತನೀಸ್ ವರ್ಷಕ್ಕೆ ಆರು ತಿಂಗಳಿಗೆ ದೇವರ ಹೆಸರಿನಲ್ಲಿ ನಡೆಯುವ ಜಾತ್ರೆಗಳ ಬಗ್ಗೆ ಹೇಳಿದ್ದಾನೆ. ಐಸಿಸ್ ದೇವತೆಯ ಹೆಸರಿನಲ್ಲಿ ಐಥೋರಿಯದಲ್ಲಿ ನಡೆಯುವ ಜಾತ್ರೆಗಳನ್ನು ಪಾಸನಿಯಸ್ ಹೇಳಿದ್ದಾನೆ. ಅಲ್ಲಿ ನಡೆಯುವ ಜನಗಳ (ಗುಲಾಮರ), ದನಗಳ, ಬೆಳ್ಳಿ, ಬಂಗಾರ, ವಸ್ತ್ರ ಉಡುಪುಗಳ, ಇತರ ಸರಕುಗಳ ವ್ಯಾಪಾರವನ್ನು ಬಣ್ಣಿಸಿದ್ದಾನೆ. ರೋಮ್, ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳ ಅತ್ಯಂತ ಪ್ರಾಚೀನತಮ ಜಾತ್ರೆ ಎಂದರೆ ಫೆರಾರ ಎಂದು ಹೇಳಲಾಗಿದೆ.									   (ಕೆ.ಎಂ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ